Wednesday, July 1, 2009

ಸಂತ ಮೇರಿ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ, ೫೭೪೧೧೬

ಎನ್. ಭವಾನಿಶಂಕರ್‌ರವರ ವೀಡಿಯೋ ಕವನಗಳ-ರಾಜ್ಯ ಮಟ್ಟದ ವಿಚಾರ ಸಂಕಿರಣ

ಕನ್ನಡದ ಮೊದಲ ವೀಡಿಯೋ ಕವನಗಳು
ಕನ್ನಡದ ಮೊದಲ ವೀಡಿಯೋಕವನ ಸಂಕಲನ ಬಿಡುಗಡೆ


ಈ ಲೇಖನದಲ್ಲಿರುವ ವಿಭಾಗಗಳು


೧. ಹಂಚಿನ ಮನೆಯ ಸಣ್ಣ ಕೋಣೆಯೇ ಸ್ಟುಡಿಯೋ
೨. ಶೈಕ್ಷಣಿಕ ಚಿತ್ರ ನಿರ್ಮಾಣದ ಉದ್ದೇಶ
೩. ನಾನು ಚಿತ್ರ ನಿರ್ಮಾಣ ಕಲಿತ ರೀತಿ
೪. ಶೈಕ್ಷಣಿಕ ಚಿತ್ರಗಳು
೫. ಬರವಣಿಗೆ
೬. ಪತ್ರಿಕೆಗಳಿಗಾಗಿ ೧೯೮೨-೮೫ ಬರೆದ ಲೇಖನಗಳು
೭. ಕವನ ಸಂಕಲನ-ನಾಟಕಗಳು
೮. ಮೌಲ್ಯ ಪ್ರತಿಪಾದನೆಯ ಕಿರು ಚಿತ್ರ ನಿರ್ಮಾಣ ಚಳುವಳಿ-ಪ್ರಶ್ನೋತ್ತರ
೯. ವೀಡಿಯೋ ಕವನವೆಂದರೆ
೧೦. ವೀಡಿಯೋ ಕವನ-ಅನುಭವದ ಹಿನ್ನೆಲೆ
೧೧. ಭವಾನಿಶಂಕರ್ ನಿರ್ಮಿಸಿದ ಟೆಲಿ ಚಿತ್ರಗಳ ಪಟ್ಟಿ



ಹಂಚಿನ ಮನೆಯ ಸಣ್ಣ ಕೋಣೆಯೇ ಸ್ಟುಡಿಯೋ

ಸುತ್ತ ಹಸಿರು ಗಿಡ ಮರಗಳು. ನಡುವೆ ಒಂದು ಹಂಚಿನ ಮನೆ. ಅಲ್ಲಿ ಹತ್ತು ಅಡಿ ಚಚ್ಚೌಕದ ಒಂದು ಚಿಕ್ಕ ಕೋಣೆ. ಅಲ್ಲಿ ಸಿನಿಮಾ ನಿರ್ಮಾಣ ನಡೆಯುತ್ತದೆಂದರೆ, ನಂಬಲು ಸಾಧ್ಯವೆ? ಪುಸ್ತಕಗಳು, ಪುಸ್ತಕಗಳ ಅಭ್ಯಾಸ, ಚಿತ್ರ ಕಥೆಯ ರಚನೆ, ಅಲ್ಲಿಯ ಗೋಡೆಯ ಮೇಲೆ ಬಣ್ಣ ಬಣ್ಣದ ಪರದೆಗಳು, ಮೇಲೆ ಕಣ್ಣು ಕುಕ್ಕುವ ಬೆಳಕು, ಸೆಖೆ, ಅದರ ಮುಂದೆ ಪಾಠ ಮಾಡುವ ವ್ಯಕ್ತಿಗಳು, ಕ್ಯಾಮರಾ ನಿರ್ವಹಣೆ, ನಿರ್ದೇಶನ, ಅನಂತರ ಕ್ಯಾಮರಾದಿಂದ ಅಲ್ಲಿಯೇ ಇರುವ ಕಂಪ್ಯೂಟರ್‌ಗೆ ಚಿತ್ರದ ವರ್ಗಾವಣೆ, ಕಂಪ್ಯೂಟರ್‌ನಲ್ಲಿ ಚಿತ್ರದ ಸಂಕಲನ, ಕಂಪ್ಯೂಟರ್‌ನಿಂದಲೇ ಸಂಗೀತದ ನಿರ್ಮಾಣ, ಚಿತ್ರಕ್ಕೆ ಸಂಗೀತದ ವರ್ಗಾವಣೆ-ಚಿತ್ರ ತಯಾರಾದ ಮೇಲೆ ಅದು ಶಿರ್ವದ ಸಂತ ಮೇರಿ ಕಾಲೇಜಿನ ಬಹು ಮಾಧ್ಯಮ ಕೊಠಡಿಯ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತದೆ. ವಿದ್ಯಾರ್ಥಿಗಳು ನೋಡುತ್ತಾರೆ. ಆ ಚಿತ್ರಗಳು ಹೀಗಿರುತ್ತವೆ-ವ್ಯಕ್ತಿತ್ವ ವಿಕಸನ ಕುರಿತ ನಾನಾ ಚಿತ್ರಗಳು, ಮನಶ್ಯಾಸ್ತ್ರದ ಟ್ರಾನ್ಸಾಕ್ಷನ್ ಅನಾಲಿಸಿಸ್, ಸೆಲ್ಫ್ ಇಮೇಜ್, ಪಾಸಿಟಿವ್ ಥಿಂಕಿಂಗ್, ಪಬ್ಲಿಕ್ ಸ್ಪೀಕಿಂಗ್, ಲೀಡರ್ ಶಿಪ್, ಕಂಪ್ಯೂಟರ್‌ನ ಒಳ ಭಾಗದ ವಿವರಗಳು, ಇಂಟರ್‌ನೆಟ್, ಈ ಮೈಲ್, ವಿಂಡೋಸ್, ಫೋಟೋಷಾಪ್ ಹೀಗೆ ನಾನಾ ರೀತಿಯ ಸಾಫ್ಟ್‌ವೇರ್‌ಗಳನ್ನು ಕುರಿತ ಚಿತ್ರಗಳು, ಇಂಗ್ಲಿಷ್ ಬಾಷಾ ಕಲಿಕೆಯ ನಾನಾ ರೀತಿಯ ಚಿತ್ರಗಳು, ಇಂಟರ್ ವ್ಯೂ, ಅಕೌಂಟೆನ್ಸಿ, ಶೇರು ಮಾರುಕಟ್ಟೆ. ಸೃಜನಶೀಲ ಬರವಣಿಗೆ, ಪೈಟಿಂಗ್, ಶಿಲ್ಪ ಕಲೆ, ಸಾಹಿತ್ಯ ರಚನೆ ಇತ್ಯಾದಿ. ಇವೆಲ್ಲ ಶೈಕ್ಷಣಿಕ ಚಿತ್ರಗಳು. ಈ ಚಿತ್ರಗಳ ನಡುವೆ-ಚಿಂತನೆಗೆ ಹಚ್ಚುವ, ವಿಡಂಬಿಸುವ, ನಗಿಸುವ-ಹತ್ತರಿಂದ ಇಪ್ಪತ್ತು ನಿಮಿಷಗಳ ಅವಧಿಯ ಕಥಾಚಿತ್ರಗಳು, ವೀಡಿಯೋ ಕವನಗಳು ಪ್ರದರ್ಶನಗೊಳ್ಳುತ್ತವೆ. ಈ ಎಲ್ಲ ಚಿತ್ರಗಳ ಚಿತ್ರ ಕಥೆ, ಕ್ಯಾಮರ, ನಿರ್ದೇಶನ, ಕಂಪ್ಯೂಟರ್‌ನಲ್ಲಿ ಸಂಕಲನ, ಸಂಗೀತ, ನಿರ್ಮಾಪಕ-ಎಲ್ಲಾ ಒಬ್ಬರೆ-ಎನ್. ಭವಾನಿ ಶಂಕರ್, ಕನ್ನಡ ಉಪನ್ಯಾಸಕರು, ಸೈಂಟ್ ಮೆರೀಸ್ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ. ಇವರ ಮನೆಗೆ ಎಲ್ಲೆಲ್ಲಿಂದಲೋ ಅನುಭವಿಗಳು ಬರುತ್ತಾರೆ. ಕ್ಯಾಮರಾದ ಮುಂದೆ ಮಾತನಾಡಿ ಹೋಗುತ್ತಾರೆ. ಸ್ವತಃ ಭವಾನಿ ಶಂಕರ್ ಕಾಲೇಜಿನಲ್ಲಿ ಪಾಠ ಮಾಡುವುದು ಕನ್ನಡವಾದರೂ ಮನೆಯಲ್ಲಿ ಕ್ಯಾಮರಾದ ಮುಂದೆ ಕಂಪ್ಯೂಟರ್ ಹಾರ್ಡ್‌ವೇರ್, ಸಾಫ್ಟ್‌ವೇರ್, ವ್ಯಕ್ತಿತ್ವ ವಿಕಸನ, ಶೇರು ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಅವರೇ ಸ್ವತಃ ಪಾಠ ಮಾಡುತ್ತಾರೆ.

ಇದುವರೆಗೆ ಅವರು ನಿರ್ಮಿಸಿದ ಚಿತ್ರಗಳು ೧೭೦. ಅವುಗಳಲ್ಲಿ ವೀಡಿಯೋ ಕವನಗಳ ಸಂಖ್ಯೆ ೫೦. ನಟರಲ್ಲದವರಿಂದ, ಮೇಕಪ್ ಇಲ್ಲದೆ, ಹೊರಾಂಗಣದಲ್ಲಿ-ಸಣ್ಣ ಕ್ಯಾಮರ ಬಿಟ್ಟು ಬೇರೆ ಯಾವ ಪರಿಕರವೂ ಇಲ್ಲದೆ ಕಥಾ ಚಿತ್ರಗಳು ತಯಾರಾಗುತ್ತವೆ. ಅನಂತರ ಮನೆಯ ಕಂಪ್ಯೂಟರ್‌ನಲ್ಲಿ ಅವು ಜೀವ ಪಡೆಯುತ್ತವೆ. ಅವರ ಚಿತ್ರಗಳ ವಸ್ತು-ಪರಿಸರ, ಮಾನವೀಯತೆ, ಜಾಗತೀಕರಣ, ಖಾಸಗೀಕರಣ, ಭ್ರಷ್ಟ ಸಾಮಾಜಿಕ ವ್ಯವಸ್ಥೆ-ಮನರಂಜನೆಯ ಜೊತೆಗೆ ಚಿಂತನೆಗೆ ತೊಡಗಿಸುವ ಕಲಾತ್ಮಕ ಚಿತ್ರಗಳು ಅವು.


ಶೈಕ್ಷಣಿಕ ಚಿತ್ರ ನಿರ್ಮಾಣದ ಉದ್ದೇಶ

ಖಾಸಗೀಕರಣದ ಈ ಕಾಲ ಘಟ್ಟದಲ್ಲಿ ಗ್ರಾಮೀಣ ಯುವ ಜನರು ಕಂಪ್ಯೂಟರ್, ಇಂಗ್ಲಿಷ್, ವ್ಯಕ್ತಿತ್ವ ವಿಕಸನದಂತಹ ಅನೇಕ ಜ್ಞಾನ ಶಾಖೆಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಆಧುನಿಕ ಜ್ಞಾನ ಅವರಿಗೆ ಲಭ್ಯವಾಗದಿದ್ದಲ್ಲಿ ಅವರು ಸ್ಪರ್ಧೆಯ ಕಣಕ್ಕೆ ಇಳಿಯಲಾರರು. ಈ ಆಧುನಿಕ ಜ್ಞಾನವನ್ನು ಸುಲಭದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಸಾಮೂಹಿಕವಾಗಿ ಒದಗಿಸಬಹುದಾದ ದಾರಿ-ಶೈಕ್ಷಣಿಕ ಚಿತ್ರಗಳ ನಿರ್ಮಾಣ. ಗ್ರಾಮೀಣ ನೆಲೆಯಲ್ಲಿರುವ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಯುವಜನರು ಜಾಗತೀಕರಣ ಮತ್ತು ಆಧುನಿಕತೆಯ ಸವಾಲುಗಳನ್ನು ಎದುರಿಸಲು ಅವರಿಗೆ ಬೇಕಾಗುವ ಎಲ್ಲಾ ರೀತಿಯ ಶೈಕ್ಷಣಿಕ ಚಿತ್ರಗಳನ್ನು ತಯಾರಿಸಿ-ಅತ್ಯಂತ ಕಡಿಮೆ ಖರ್ಚಿನಲ್ಲಿ ತೋರಿಸಿ-ತರಬೇತಿ ನೀಡುವುದು-ಈ ಯತ್ನದ ಹಿಂದಿರುವ ಉದ್ದೇಶ.

ಈ ಎಲ್ಲ ಸಾಹಸಗಳು ಒಂದೇ ದಿನ ಘಟಿಸಿದ್ದಲ್ಲ. ಕಂಪ್ಯೂಟರ್ ಎಡಿಟಿಂಗ್ ಚಾಲ್ತಿಗೆ ಬರುವ ಮುಂಚೆಯೇ ೨೦೦೦-೦೧ ರಲ್ಲಿ

ಬೂಸ್ಟು ಹಿಡಿದ ಶೈಕ್ಷಣಿಕ ಚಿತ್ರಗಳು: (೨೦೦೦-೦೧)

ಭಾರತದ ಪುಕುವೋಕಾ-ಚೇರ್ಕಾಡಿ ರಾಮಚಂದ್ರ ರಾವ್
ವಿದ್ಯುತ್ ಸಾಹಸಿ-ಮಧ್ವರಾಜ ಸುವರ್ಣ, ಪಡುಬಿದ್ರಿ
ಸ್ವ ಉದ್ಯೋಗಿ ಸ್ತ್ರೀಯರು-ಅಪೂರ್ವ ಇಂಡಸ್ಟ್ರೀಸ್, ಎರ್ಮಾಳ್
ಸಾವಯವ ಕೃಷಿಕ-ಪೀಟರ್ ಮಿರಾಂಡ, ಮಾಂಟ್ರಾಡಿ, ಕಾರ್ಕಳ
ರೈತರಿಗಾಗಿ ಚಿಕ್ಕ ಕೃಷಿ ಉಪಕರಣಗಳು
ಕಂಪ್ಯೂಟರ್ ಮೇಳ-ಮಂಗಳೂರು, ೨೦೦೧
ಮಲ್ಟಿಮೀಡಿಯಾ ಎಕ್ಸಿಬಿಷನ್-ಮಂಗಳೂರು, ೨೦೦೧
ಕೃಷಿ ಪ್ರದರ್ಶನ-ಮಿಜಾರು-ಮೂಡಬಿದ್ರಿ-೨೦೦೧
ಕೃಷಿ ನರ್ಸರಿಗೊಂದು ಮನ್ನುಡಿ


ಇತ್ಯಾದಿಗಳ ಬಗ್ಗೆ ತಮ್ಮದೇ ಆದ ಎನಲಾಗ್ ಕ್ಯಾಮರಾ, ಇಲೆಕ್ಟ್ರಾನಿಕ್ ಮಿಕ್ಸರ್, ಟೈಟ್ಲರ್, ವಿಸಿ‌ಆರ್‌ಗಳಿಂದ ಚಿತ್ರೀಕರಣ ಮಾಡುತ್ತಿದ್ದ ಹೊತ್ತಿಗೆ ಕಂಪ್ಯೂಟರ್ ಬಂದೇ ಬಿಟ್ಟಿತು. ಮೇಲಿನ ಚಿತ್ರಗಳ ಕ್ಯಾಸೆಟ್‌ಗಳು ಬೂಸ್ಟು ಬಂದು ಎಲ್ಲಾ ಹಾಳಾದವು. ಇದ್ದದ್ದೆಲ್ಲ ಮಾರಾಟ ಮಾಡಿ ಒಂದೆರಡು ಲಕ್ಷ ಕಳೆದುಕೊಂಡು ನಾಲ್ಕು ವರ್ಷ ಸುಮ್ಮನೆ ಕುಳಿತ ಮೇಲೆ ಈಗ ಮತ್ತೆ ಡಿಜಿಟಲ್ ತಂತ್ರಜ್ಞಾನದ ನೆರಳಲ್ಲಿ ಚಲಿಸುವ ಚಿತ್ರಗಳ ಕಥೆಯು ಆರಂಭವಾಗಿದೆ.

ಚಿತ್ರ ನಿರ್ಮಾಣದ ಕಲಿಕೆ

ಯಾವೆಲ್ಲ ಹವ್ಯಾಸಗಳು, ಆಸಕ್ತಿಗಳು ಬಂದರೂ, ಹೋದರೂ ಆಳವಾದ ಒಲವು ಚಿತ್ರ ನಿರ್ಮಾಣದ ಬಗೆಗೆ. ಈ ಚಿತ್ರ ನಿರ್ಮಾಣ ಆರಂಭವಾದದ್ದು-೧೯೭೪ ರಲ್ಲಿ ೧೦೦ ರೂಗಳ ಬಿಳಿ ಕಪ್ಪು ಫೋಟೋ ತೆಗೆಯುವ ಕ್ಲಿಕ್-೩ ಸ್ಟಿಲ್ ಕ್ಯಾಮರಾದಿಂದ. ಈ ಆಸಕ್ತಿಯನ್ನು ಆಳವಾಗಿ ಬೆಳೆಸಿದ್ದು-ಕೆ. ವಿ. ಸುಬ್ಬಣ್ಣನವರ ಹೆಗ್ಗೋಡಿನ ಚಿತ್ರ ಸಂಸ್ಕೃತಿ ಶಿಬಿರಗಳು. ಸಿನಿಮಾ ತಂತ್ರಗಳ ಅನೇಕ ಸಂಗತಿಗಳನ್ನು ತಿಳಿದದ್ದು-ಪ್ರಸಿದ್ಧ ನಾಟಕ ನಿರ್ದೇಶಕರಾದ ಸುರೇಶ್ ಆನಗಳ್ಳಿ, ಟೆಲಿ ಸಿರಿಯಲ್ ನಿರ್ದೇಶಕರಾದ ಕೆ. ಕೃಷ್ನಮೂರ್ತಿ ಕವತ್ತಾರ್, ಪೂನಾ ಫಿಲ್ಮ್ ಇನ್‌ಸ್ಟಿಸ್ಟ್ಯೂಟ್‌ನಲ್ಲಿ ಕಲಿಯುತ್ತಿದ್ದ ಅಭಯಸಿಂಹ ಅವರಿಂದ. ಎಲ್ಲಕ್ಕಿಂತ ಮುಖ್ಯವಾಗಿ ಕಂಪ್ಯೂಟರ್‌ನ ಮೂಲಕ ಸಂಕಲನವನ್ನು ಕಲಿಸಿದವರು-ಈ ವಿಚಾರದಲ್ಲಿ ಅತ್ಯಂತ ಪ್ರತಿಭಾವಂತರಾದ ಉಡುಪಿಯ ತಸ್ವೀರ್ ಸ್ಟುಡಿಯೋದ ಪ್ರಮೋದ್. ಇತರ ಗುರುಗಳು-ಸಿನಿಮಾ ಪುಸ್ತಕಗಳು, ಇಂಟರ್‌ನೆಟ್, ಅಧ್ಯಯನ, ಪ್ರಯೋಗಶೀಲತೆ.

ಶೈಕ್ಷಣಿಕ ಚಿತ್ರಗಳು

ಈ ವೀಡಿಯೋ ಕವನಗಳಲ್ಲದೆ ಅವರು ಶೈಕ್ಷಣಿಕ ಹಾಗೂ ಡಾಕ್ಯುಮೆಂಟರಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಂಪ್ಯೂಟರ್ ಕ್ಷೇತ್ರವನ್ನು ಕುರಿತಂತೆ ಕನ್ನಡದ ನುಡಿ ಸಾಫ್ಟ್‌ವೇರ್, ವಿಂಡೋಸ್ ಆಪರೇಟಿಂಗ್ ಸಿಸ್ಟಂ, ಕಂಪ್ಯೂಟರ್ ಹಾರ್ಡ್‌ವೇರ್, ಕಂಪ್ಯೂಟರ್‌ನ ಪ್ರೋಗ್ರಾಮ್ಮಿಂಗ್ ಭಾಷೆ, ಈ ಮೈಲ್, ಇಂಟರ್‌ನೆಟ್, ಎಂ.ಎಸ್. ಎಕ್ಸೆಲ್, ಎಂ.ಎಸ್ ವರ್ಡ್, ಎಂ.ಎಸ್ ಪವರ್ ಪಾಯಿಂಟ್, ಎಂ.ಎಸ್ ಪೈಂಟ್, ಫೋಟೋಷಾಪ್. ಇತರ ಕ್ಷೇತ್ರಗಳನ್ನು ಕುರಿತಂತೆ ಭಾಷಣಕಲೆ, ಧನಾತ್ಮಕ ಚಿಂತನೆ, ನಾಯಕತ್ವ, ಸ್ವಬಿಂಬ, ಮನಶ್ಯಾಸ್ತ್ರದ ವ್ಯಾವಹಾರಿಕ ವಿಶ್ಲೇಷಣೆ, ನಾವು ಬದಲಾಗಬಹುದು, ಇಂಗ್ಲಿಷ್ ಕಲಿಕೆಯ ಕುರಿತಂತೆ ಐಪಿ‌ಎ-ಇಂಗ್ಲಿಷ್ ಸೌಂಡ್ಸ್, ಯು.ಎಸ್ ಇಂಗ್ಲಿಷ್ ಯು.ಕೆ ಇಂಗ್ಲಿಷ್, ಷೇರು ಮಾರುಕಟ್ಟೆ, ಷೇರು ಮಾರುಕಟ್ಟೆಯ ಆನ್ ಲೈನ್ ಟ್ರೇಡಿಂಗ್-ಈ ರೀತಿಯ ಚಿತ್ರಗಳಿಗೆ ಅವರೇ ಸಂಪನ್ಮೂಲ ವ್ಯಕ್ತಿ. ಇದೆಲ್ಲದರ ಜೊತೆಗೆ ಒಂದು ಗಂಟೆಯ ಅವಧಿಯ ಜ್ಯೋತ್ಸ್ನಾ ಎಂಬ ಕಥಾ ಚಿತ್ರವನ್ನು ನಿರ್ಮಿಸಿದ್ದಾರೆ. ಇವಲ್ಲದೆ ಇತರರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬಳಸಿಕೊಂಡು ಕನ್ನಡ ವ್ಯಾಕರಣ, ಸೃಜನ ಬರವಣಿಗೆ, ಇಂಗ್ಲಿಷ್, ನಾಟಕ ಕಲೆ, ಕಂಬಳ, ಚಿತ್ರಕಲೆ, ಅಂತಾರಾಷ್ಟ್ರೀಯ ಗಾಳಿಪಠ ಉತ್ಸವ, ನಟನೆಯ ಪಾಠ, ಅಡಿಗರ ಕಾವ್ಯ, ಆವೆ ಮಣ್ಣಿನ ಕಲಾಕೃತಿಗಳು, ಜಾಗತೀಕರಣ, ಮಾತಿನ ಇಂಗ್ಲಿಷ್, ಸಂದರ್ಶನ, ಸಂದರ್ಶನದ ಪ್ರಶ್ನೆಗಳು, ಗುಂಪು ಚರ್ಚೆ, ಸಾಫ್ಟ್ ಸ್ಕಿಲ್ಸ್, ಪ್ರವೇಶ ಪರೀಕ್ಷೆಗಳು, ಕ್ವಿಜ್, ಅಕೌಂಟೆನ್ಸಿ-ಹೀಗೆ ಅವರು ಒಟ್ಟು ೧೭೦ ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಬಳಸಿಕೊಂಡು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತೀ ಶನಿವಾರ ಮಧ್ಯಾಹ್ನ ಮೂರು ವರ್ಷಗಳಿಂದ ಈ ಕುರಿತು ಪಾಠ ಮಾಡುವ, ವ್ಯಕ್ತಿತ್ವದ ವಿಕಸನದೊಂದಿಗೆ ಕಲಾಸಕ್ತಿಯನ್ನು ಬೆಳೆಸುವ ಮತ್ತು ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇವರ ಎಲ್ಲಾ ಚಿತ್ರಗಳಿಗೆ ತಮ್ಮ ಕಾಲೇಜಿನ ವಿದ್ಯಾಥಿಗಳು ಕೇಂದ್ರ ಬಿಂದು.

ಕನ್ನಡ ವೀಡಿಯೋ ಕವನ-ಒಂದು ಹೊಸ ನಿರ್ಮಿತಿ ರಾಜ್ಯ ಮಟ್ಟದ ವಿಚಾರ ಸಂಕಿರಣ

ಹೀಗೆ ಎಲೆಯ ಮರೆಯ ಕಾಯಿಯಂತೆ ಏಕಾಂಗಿಯಾಗಿ ವಿವಿಧ ಹವ್ಯಾಸಗಳೊಂದಿಗೆ ತೊಡಗಿಸಿಕೊಂಡವರು ಅವರು. ಈಗ ಅವರ ಕನ್ನಡದ ಮೊದಲ ವಿಡಿಯೋ ಕವನಗಳು ಎಂಬ ಕನ್ನಡದ ಮೊಟ್ಟ ಮೊದಲ ವೀಡಿಯೋ ಸಂಕಲನ, ಕನ್ನಡ ವೀಡಿಯೋ ಕವನ-ಒಂದು ಹೊಸ ನಿರ್ಮಿತಿ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಆಗಸ್ಟ್ ೨೭ ಮತ್ತು ೨೮ ರಂದು ನಡೆಯುವ ಎರಡು ದಿನಗಳ ಗೋಷ್ಠಿಯ ಸಂದರ್ಭದಲ್ಲಿ ಅವರ ವೀಡಿಯೋ ಕವನಗಳ ಪ್ರದರ್ಶನ, ರಸಗ್ರಹಣ, ವಿಮರ್ಶೆ ಮತ್ತು ಚರ್ಚೆ ನಡೆಯಲಿದೆ.


ಬರವಣಿಗೆ

೧೯೮೨-೮೫ ರ ಅವಧಿಯಲ್ಲಿ ಪತ್ರಿಕೆಗಳಿಗೆ ಫೋಟೋ ತೆಗೆದು ಬರೆದ ಲೇಖನಗಳ ಸಂಖ್ಯೆ ೭೦ ಕ್ಕೂ ಹೆಚ್ಚು. ಈ ಸಂದರ್ಭದಲ್ಲಿ ಪ್ರಕಟಗೊಂಡ ಸ್ಥಿರ ಚಿತ್ರಗಳು-೨೫. ಅವರ ಕ್ಷೇತ್ರವಾದ ಕನ್ನಡ ಸಾಹಿತ್ಯದ ಕುರಿತ ಬರಳೆಣಿಕೆಯ ಲೇಖನಗಳನ್ನು ಬಿಟ್ಟರೆ, ಉಳಿದವೆಲ್ಲ ನಾನಾ ವಿಷಯಗಳಿಗೆ ಸಂಬಂಧಿಸಿದವು. ಕೆಲವು ಲೇಖನಗಳ ಹೆಸರು ಇಂತಿವೆ.


ಪತ್ರಿಕೆಗಳಿಗಾಗಿ ೧೯೮೨-೮೫ ಬರೆದ ಲೇಖನಗಳು

ಪ್ರವಾಸ:
ಮಲೆನಾಡ ಹಾಡು (ಮಳೆಗಾಲದಲ್ಲಿ ಮಲೆನಾಡಿನ ಶಿಖರಗಳಲ್ಲಿ ನಡಿಗೆಯ ಪ್ರವಾಸ ಮಾಡಿದ್ದು-ಉದಯವಾಣಿಯ ಸಾಪ್ತಾಹಿಕದ ಮೊದಲ ಪುಟದಲ್ಲಿ-ಒಂದು ಪೂರ್ತಿ ಪುಟ-೭ ಫೋಟೋ ಸಮೇತ-ಮೊದಲ ಲೇಖನ) , ಮಧ್ಯ ಪ್ರದೇಶ-ಎದೆ ಜುಮ್ಮು ಜುಮ್ಮೆನೆ (ಜಬಲ್‌ಪುರ ಸಮೀಪದ ಪ್ರವಾಸ ಕಥನ), ಹೈದರಾಬಾದ್‌ನಿಂದ ಮಂಬಯಿಗೆ (ಪ್ರವಾಸ), ಅಜ್ಜಿ ಕುಂಜ, ಆಗುಂಬೆಯಲ್ಲಿ ಒನಕೆ ಅಬ್ಬಿ, ಖಜುರಾಹೊ, ಬಲ್ಲಾಳರಾಯನ ದುರ್ಗ

ಸಾಹಿತ್ಯ, ಕಲೆ:
ಅಭಿನಯ, ಕವನ-ಕಥೆ-ಕಾದಂಬರಿ, ಕುಂದ ಜನಪದ ಗೀತೆಗಳು-ಒಂದು ವಿಶ್ಲೇಷಣೆ, ಕಾದಂಬರಿ, ಕಾರಂತರ ಕೃತಿಗಳಲ್ಲಿ ಮನುಷ್ಯನ ಒಳಗು ಹೊರಗು, ೧೨ನೆ ಶತಮಾನದ ಕ್ರಾಂತಿ,

ಮಿಶ್ರ:
ದಾಸರ ಮಠ, ವಿದ್ಯಾರ್ಥಿಗಳು ಮತ್ತು ಗೂಂಡಾಗಿರಿ, ರಾಜಕಾರಿಣಿ ಹಕ್ಕಿ-ಹದ್ದು, ಸೃಷ್ಠಿ, ಹಕ್ಕಿಗಳು, ಪ್ರಕೃತಿ ಚಿಕಿತ್ಸೆ, ಸೂರ್ಯ, ಹಿಪ್ನಾಟಿಸಂ, ಬಣ್ಣದ ಚಿಟ್ಟೆ, ಜನನಾಯಕರು, ಉಪಯುಕ್ತ ಲೇಖನ, ಗಾಂಧೀಜಿಯ ಅಸ್ತ್ರಗಳು, ಆಶಾವಾದಿ ಪ್ರಜ್ಙಾವಂತರಿಗೊಂದು ಕಾರ್ಯಕ್ರಮ, ಸಮಾಜವಾದ, ಜಾತಿ, ಮನಸ್ಸು,, ಚುನಾವಣೆ, ಗೂಂಡಾಗಿರಿ, ಸಾವಿನ ಭಯ, ಸಭೆ, ಭೂಮಿ ಮನುಷ್ಯ ಮತ್ತು ದೇವರು, ಭೂತ, ಜನಾಭಿಪ್ರಾಯ, ಅಸ್ಪೃಶ್ಯತೆ, ಇಂಡಿಯಾದಲ್ಲಿ......., ಸಿನಿಮಾ, ದೇವರು ದೇವಸ್ಥಾನ, ಕಾಮ, ಕಾಡು, ಪ್ರಜಾಪ್ರಭುತ್ವ, ಸ್ತ್ರೀಯರು ಬಂಡೇಳಬೇಕು, ರಾಜ್ಯ ವ್ಯವಸ್ಥೆಗಳು, ಸಮತೋಲನ ಆಹಾರ, ಮತದಾರರ ಮುಂದೊಂದು ಪ್ರಶ್ನೆ, ಚುನಾವಣೆ ಅನಿಷ್ಟಗಳ ನಿವಾರಣೆ-ಪ್ರತಿಪಕ್ಷಗಳ ಆಶಾನೆಲೆ, ಕೆನೆಡಾದ ವಿದ್ಯಾರ್ಥಿ ಅಲನ್ ರಾಸ್, ಶಟಲ್ ಕಾಕ್, ಒಂದು ವಿಶ್ವಾಸದ ನಡೆ

ಸಿನಿಮಾ:
ಸಿನಿಮಾದ ಇತಿಹಾಸ, ಛಾಯಾಗ್ರಹಣ, ಪತೇರ್ ಪಾಂಚಾಲಿ, ಮೆಶಸ್ ಆಫ್ ದಿ ಆಫ್ಟರ್‌ನೂನ್, ಇನ್ಸಿಡೆಂಟ್ ಎಟ್ ಔಲ್ ಕ್ರೀಕ್, ಬ್ಯಾಟ್ಲ್‌ಶಿಪ್ ಪೊಟೆಂಕಿನ್, ಗ್ಲಾಸ್, ಸಿನಿಮಾದ ತಂತ್ರ, ಕ್ಯಾಬರೆ-ಬಾತ್ ರೂಂ-ಬೆಡ್‌ರೂಂ, ಪ್ರಶಸ್ತಿಗಳ ಛಾಯಾಗ್ರಾಹಕ ರಾಮಚಂದ್ರ (ಸಂದರ್ಶನ), ಕನಸುಗಳನ್ನು ಹೆಣೆಯುವ ಕಳಪೆ ಸಿನಿಮಾ, ಹೊಸ ಜಾಡಿನ ಅನ್ವೇಶಣೆಯಲ್ಲಿ ಟಿ. ಎಸ್. ನಾಗಾಭರಣ (ಸಂದರ್ಶನ),


ಕವನ ಸಂಕಲನ-ನಾಟಕಗಳು

೧೯೮೨-೧೯೮೩ ರಲ್ಲಿ ಪ್ರಕಟಗೊಂಡ ಕವನ ಸಂಕಲನಗಳು ೨-ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ. ೧೯೮೨-೧೯೮೪ ರ ಅವಧಿಯಲ್ಲಿ ಪ್ರಕಟಗೊಂಡ ನಾಟಕಗಳು ೫-ಜಿಂದಾಬಾದ್ ಜಿಂದಾಬಾದ್, ಬ್ರಾಹ್ಮಣ ಶೂದ್ರ, ಕೆಂಪು ಕೋಗಿಲೆ, ಗೋಲೀಬಾರ್, ಪ್ರೇಮಾಸೈಟಿಸ್. ೧೯೮೩ ರಲ್ಲಿ ಶಿರ್ವದ ಬಳಕೆದಾರರ ಪತ್ರಿಕೆಯ ಸಂಪಾದಕ. ಇಷ್ಟಲ್ಲದೆ ಕಂಪ್ಯೂಟರ್ ಬಂದ ಹೊಸತರಲ್ಲಿ ೧೯೯೧-೯೩ ರಲ್ಲಿ ಶನಿವಾರ, ಭಾನುವಾರಗಳಂದು ಕಾಲೇಜಿನಲ್ಲಿ ಕಂಪ್ಯೂಟರ್ ಪ್ರೊಗ್ರಾಮಿಂಗ್ ಬಗ್ಗೆ ಪಾಠ. ಅನಂತರ ಆಸಕ್ತಿ ಕುದುರಿದ್ದು ಸಹಜ ಕೃಷಿಯ ಬಗ್ಗೆ.


ಮೌಲ್ಯ ಪ್ರತಿಪಾದನೆಯ ಕಿರು ಚಿತ್ರ ನಿರ್ಮಾಣ ಚಳುವಳಿ-ಪ್ರಶ್ನೋತ್ತರ

ಉಡುಪಿಯ ಸಮೀಪದ ಶಿರ್ವದ ಸೈಂಟ್ ಮೆರೀಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಎನ್ ಭವಾನಿಶಂಕರ್ ಅವರು ವೈಚಾರಿಕತೆ, ಮೌಲ್ಯ ಜಿಜ್ಞಾಸೆ, ರಾಷ್ಟ್ರದ ಪ್ರಗತಿ ಈ ಅಂಶಗಳನ್ನು ಗುರಿಯಾಗಿಟ್ಟುಕೊಂಡು ಹವ್ಯಾಸಕ್ಕಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಿರು ಚಿತ್ರ ನಿರ್ಮಾಣವನ್ನು ಮಾಡುತ್ತಿದ್ದಾರೆ. ವೀಡಿಯೋ ಕ್ಯಾಮರ, ಕಂಪ್ಯೂಟರ್, ಸಾಫ್ಟ್‌ವೇರ್‌ಗಳಿಂದಾಗಿ ಇಂದು ಒಬ್ಬನೇ ವ್ಯಕ್ತಿ ಟೆಲಿಚಿತ್ರವನ್ನು ನಿರ್ಮಿಸುವುದು ಅತ್ಯಂತ ಸುಲಭಸಾಧ್ಯವಾದ ವಿಚಾರವಾಗಿದೆ. ಇಂತಹ ಚಿತ್ರಗಳನ್ನು ನಮ್ಮ ಯುವಜನರು ಮಾಡುವಂತಾಗಬೇಕು, ಇದೊಂದು ಚಳವಳಿಯಾಗಿ ಬೆಳೆಯಬೇಕು ಎಂಬುದು ಅವರ ಆಸೆ. ಅದಕ್ಕಾಗಿ ಟೆಲಿ ಚಿತ್ರ ನಿರ್ಮಾಣದ ಕಮ್ಮಟಗಳನ್ನು ಅವರು ನಡೆಸುತ್ತಾರೆ

.
ಕಾಲೇಜಿನ ಉಪನ್ಯಾಸಕರಾಗಿದ್ದುಕೊಂಡು ಟೆಲಿಚಿತ್ರ ನಿರ್ಮಾಣಕ್ಕೆ ಕೈ ಹಾಕಲು ಕಾರಣ

ಟೆಲಿ ಚಿತ್ರ ನಿರ್ಮಾಣದ ಕೆಲಸವನ್ನು ನಾನು ಮಾಡುವುದು ಭಾನುವಾರ ಮತ್ತು ರಜಾ ದಿನಗಳಂದು ಮಾತ್ರ. ಸಾಹಿತಿಯಾಗಿದ್ದುಕೊಂಡು ಕಥೆ, ಕವನ ಬರೆಯುವಂತೆ ನನಗೆ ಇದು ಒಂದು ಹವ್ಯಾಸ ಮಾತ್ರ. ನಾನು ಟೆಲಿ ಚಿತ್ರದ ಮೂಲಕ ಬರೆಯುವುದು-ಚಿತ್ರಿಸುವುದು ಕಥೆಯನ್ನು, ಕವನವನ್ನು. ಮಾಧ್ಯಮ ಬೇರೆ ಅಷ್ಟೆ. ಇದು ತನಕ ನಾನು ಬರೆದ ಕಥೆಗಳನ್ನು ಚಿತ್ರ ಮಾಡಿದ್ದೇನೆ. ಶೈಕ್ಷಣಿಕ ಚಿತ್ರಗಳನ್ನೂ ಮಾಡಿದ್ದೇನೆ.
ಚಿತ್ರ ನಿರ್ಮಾಣದ ಉದ್ದೇಶ

ನನ್ನ ಚಿತ್ರಗಳು ವ್ಯಾಪಾರೀ ಉದ್ದೇಶದವಲ್ಲ. ನನ್ನ ಚಿತ್ರಗಳ ಉದ್ದೇಶ ಆಧುನಿಕ ಶಿಕ್ಷಣದ ಪ್ರಸಾರ, ಮೌಲ್ಯ ಪ್ರತಿಪಾದನೆ, ಭಾರತದ ಪ್ರಗತಿ, ಭಾರತದ ವಾಸ್ತವಿಕ ಸಮಸ್ಯೆಗಳು ಮತ್ತು ಕಲಾತ್ಮಕತೆ.

ಈ ಚಿತ್ರಗಳ ಪ್ರಸಾರದ ರೀತಿ

ಯಾವುದೇ ಚಾನೆಲ್‌ನಲ್ಲಿನ ಪ್ರಸಾರ ನನ್ನ ಪ್ರಧಾನ ಉದ್ದೇಶವಲ್ಲ. ಯುವಜನರು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಸಕ್ತಿಯುಳ್ಳ ಯಾರಿಗೇ ಆಗಲಿ ಟೆಲಿ ಚಿತ್ರ ಪ್ರದರ್ಶಿಸುವುದು ಮತ್ತು ತರಬೇತಿಯನ್ನು ನೀಡುವುದು ನನ್ನ ಉದ್ದೇಶ. ನಮ್ಮ ವಿದ್ಯಾರ್ಥಿಗಳು ಶಿಕ್ಷಿತರಾಗಬೇಕು, ನಮ್ಮ ದೇಶದ ಪ್ರಗತಿ ಮತ್ತು ಮೌಲ್ಯಗಳ ಬಗ್ಗೆ ವಿಚಾರ ಮಾಡುವಂತಾಗಬೇಕೆಂಬುದೇ ನನ್ನ ಆಸೆ.

ಇಂತಹ ಒಂದು ಕೆಲಸಕ್ಕೆ ಪ್ರೇರಣೆ

ನನಗೆ ಚಿಕ್ಕಂದಿನಿಂದಲೂ ಸ್ಟಿಲ್ ಕ್ಯಾಮರ ಒಂದು ಹವ್ಯಾಸವಾಗಿತ್ತು. ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಚಿತ್ರಗಳನ್ನು ಎಂದಾದರು ಒಂದು ದಿನ ಮಾಡಬೇಕೆಂಬ ಆಸೆ ಮತ್ತು ಹೊಳಹು ನನ್ನಲ್ಲಿ ಹುಟ್ಟಿದ್ದು ೨೪ ವರ್ಷಗಳ ಹಿಂದೆ. ಹೆಗ್ಗೋಡಿನ ಕೆ. ವಿ. ಸುಬ್ಬಣ್ಣನವರಿಂದ. ಅಂದರೆ ೧೯೮೩ ರಿಂದ ಹೆಗ್ಗೋಡಿನ ಕೆ. ವಿ. ಸುಬ್ಬಣ್ಣನವರ ಚಿತ್ರ ಸಂಸ್ಕೃತಿಯ ಹತ್ತು ದಿನದ ಶಿಬಿರಗಳಿಗೆ ನಾನು ಹೋಗುತ್ತಿದ್ದೆ. ಆ ಹತ್ತು ದಿನಗಳಲ್ಲೂ ಬೆಳಿಗ್ಗೆಯಿಂದ ರಾತ್ರಿ ಹನ್ನೊಂದರ ತನಕ ಪ್ರಪಂಚದ ಶ್ರ್ರೇಷ್ಠ ಚಿತ್ರಗಳನ್ನು ನೋಡುವುದು ಮತ್ತು ಆ ಬಗ್ಗೆ ಚರ್ಚಿಸುವುದು. ಇದರೊಂದಿಗೆ ಕೆ. ವಿ. ಸುಬ್ಬಣ್ಣ, ಅನಂತಮೂರ್ತಿ, ಗಿರೀಶ್ ಕಾಸರವಳ್ಳಿ, ಸತೀಶ್ ಬಹಾದುರ್ ಮತ್ತಿತರರ ಮಾತುಗಳನ್ನು ಕೇಳುವುದು. ಸುಬ್ಬಣ್ಣನವರು ಒಂದು ಹಳ್ಳಿಯಲ್ಲಿ ಮಾಡಿದ ಪ್ರಯೋಗವು ಭಾರತದಲ್ಲಿ ಎಲ್ಲೂ ನಡೆದಿರಲಿಕ್ಕಿಲ್ಲ. ಇಷ್ಟಲ್ಲದೆ ಸಿನಿಮಾದ ತಾಂತ್ರಿಕ ವಿಚಾರಗಳನ್ನು ನಾನು ಕಲಿತದ್ದು ಪ್ರಸಿದ್ಧ ನಾಟಕ ನಿರ್ದೇಶಕರಾದ ಸುರೇಶ್ ಆನಗಳ್ಳಿ, ಟೆಲಿ ಸಿರಿಯಲ್ ನಿರ್ದೇಶಕರಾದ ಕೆ. ಕೃಷ್ನಮೂರ್ತಿ ಕವತ್ತಾರ್, ಪೂನಾ ಫಿಲ್ಮ್ ಇನ್‌ಸ್ಟಿಸ್ಟ್ಯೂಟ್‌ನಲ್ಲಿ ಕಲಿಯುತ್ತಿದ್ದ ಅಭಯಸಿಂಹ ಅವರಿಂದ. ಕಂಪ್ಯೂಟರ್‌ನ ಮೂಲಕ ಸಂಕಲನವನ್ನು ನಾನು ಕಲಿತಿದ್ದು ಈ ವಿಚಾರದಲ್ಲಿ ಅತ್ಯಂತ ಪ್ರತಿಭಾವಂತರಾದ ಉಡುಪಿಯ ತಸ್ವೀರ್ ಸ್ಟುಡಿಯೋದ ಪ್ರಮೋದ್‌ರವರಿಂದ. ಮೈಸೂರಿನ ಏವಿ‌ಆರ್‌ಸಿ, ಮೈಸೂರು ವಿವಿಯ ಜರ್ನಲಿಸಂ ವಿಭಾಗ, ಬೆಂಗಳೂರಿನಲ್ಲಿನ ಟೆಲಿ ಚಿತ್ರೀಕರಣಗಳಿಗೆ ಬೇಟಿ ನೀಡಿ ಕಲಿತಿದ್ದೇನೆ. ಇವರೆಲ್ಲರ ಕಾರಣದಿಂದಾಗಿ, ಒಂದು ಚಿತ್ರದ ಕಥೆ, ಕ್ಯಾಮರಾ, ಕಂಪ್ಯೂಟರ್ ಸಂಕಲನ, ನಿರ್ದೇಶನ ಎಲ್ಲವನ್ನು ಮಾಡಲು ನನಗೆ ಸಾಧ್ಯವಾಗಿದೆ. ಸಾಫ್ಟ್‌ವೇರ್‌ಗಳ ನೆರವಿನಿಂದ ಒಂದು ಮಿತಿಯಲ್ಲಿ ನನಗೆ ಬೇಕಾದ ರೀತಿಯ ಸಂಗೀತದ ನಿರ್ಮಾಣವನ್ನೂ ಮಾಡಿಕೊಳ್ಳುತ್ತಿದ್ದೇನೆ.


ಟೆಲಿ ಚಿತ್ರಕ್ಕೆ ಬಂಡವಾಳದ ಹೊಂದಾಣಿಕೆ

ಇಲ್ಲ ನನ್ನ ಚಿತ್ರಗಳಿಗೆ ದೊಡ್ಡ ಬಂಡವಾಳ ಬೇಕಿಲ್ಲ. ನಾನು ಚಿತ್ರ ನಿರ್ಮಾಣಕ್ಕಾಗಿ ಹ್ಯಾಂಡಿ ಕ್ಯಾಂ ನಂತಹ ವೀಡಿಯೋ ಕ್ಯಾಮರಾವನ್ನ್ರೂ ಬಳಸುತ್ತೇನೆ. ಅದರ ಒಂದು ದಿನದ ಬಾಡಿಗೆ, ಕ್ಯಾಸೆಟ್‌ನ ಖರ್ಚು. ಕಂಪ್ಯೂಟರ್‌ನಲ್ಲಿನ ಸಂಕಲನದ ಅನಂತರ ನೀಡಬೇಕಾದ ಸಂಗೀತ-ಇವೆಲ್ಲ ಸೇರಿ ಒಟ್ಟು ಖರ್ಚು ಎರಡು ಸಾವಿರಕ್ಕಿಂತ ಕಡಿಮೆ. ಈ ಎರಡು ಸಾವಿರದಲ್ಲಿ ೨೦ ರಿಂದ ೬೦ ನಿಮಿಷಗಳ ಅವಧಿಯ ಚಿತ್ರವನ್ನು ನಿರ್ಮಿಸುತ್ತೇನೆ. ಇದೇ ಚಿತ್ರವನ್ನು ಎಲ್ಲದಕ್ಕೂ ಹಣ ಕೊಟ್ಟು ಮಾಡಿಸುವುದಾದರೆ ಕನಿಷ್ಠ ಐದರಿಂದ ಹತ್ತು ಸಾವಿರ ರೂ. ಬೇಕು. ಹೊರಗಡೆ ಕಂಪ್ಯೂಟರ್ ಸಂಕಲನದ ಬಾಡಿಗೆಯೆ ಬಹಳವಾಗುತ್ತದೆ. ಈ ಎಲ್ಲಾ ಕೆಲಸವನ್ನು ನಾನೇ ಮಾಡುವುದರಿಂದ ಹಣ ಉಳಿಯುತ್ತದೆ. ಆಡಿಯೋ ರೆಕಾರ್ಡಿಂಗನ್ನು ಕೂಡ ನಾನೇ ಮಾಡುತ್ತೇನೆ.

ಇತರ ಹವ್ಯಾಸಗಳು

ನನ್ನ ಹವ್ಯಾಸಗಳ ಸ್ವರೂಪವೆಂದರೆ-ಬಹಳ ಮುಖ್ಯವಾಗಿ ಅವು ಬದಲಾಗುತ್ತ ಬಂದಿವೆ. ೧೯೮೨ ಇಸವಿಯಲ್ಲಿ ಜಿಂದಾಬಾದ್ ಜಿಂದಾಬಾದ್ ಎಂಬ ನಾಟಕವನ್ನು ಬರೆದೆ. ಅನಂತರ ಬರೆದ ನಾಟಕಗಳು ಕೆಂಪು ಕೋಗಿಲೆ, ಪ್ರೇಮಾಸೈಟಿಸ್, ಬ್ರಾಹ್ಮಣ ಶೂದ್ರ, ಗೋಲೀಬಾರ್. ಇವೆಲ್ಲವೂ ರಾಜಕೀಯ, ಆರ್ಥಿಕ ಸಮಸ್ಯೆಗಳನ್ನು ಎತ್ತಿಕೊಂಡ ನಾಟಕಗಳು. ಇದೇ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ನಾಟಕ ರಚಿಸಿ ನಿರ್ದೇಶಿಸಿದ ಅನುಭವವೂ ಇದೆ. ನನ್ನ ಕವನ ಸಂಕಲನಗಳು ಏಳಯ್ಯ ಬಾಲಿಬಹು ಮತ್ತು ಮೀನು ಮಲ್ಲಿಗೆ. ೧೯೮೨-೮೫ರ ಅವಧಿಯಲ್ಲಿ ನಾನು ಪತ್ರ್ರಿಕೆಗೆ ಬರೆದ ಲೇಖನಗಳ ಸಂಖ್ಯೆ ಸುಮಾರು ೭೫. ಅವುಗಳಲ್ಲಿ ಬಹುತೇಕ ಲೇಖನಗಳು ಛಾಯಾಚಿತ್ರ ಸಹಿತವಾದವು. ಈ ಲೇಖನಗಳು ಪರಿಸರ, ಸಿನಿಮಾ, ಪ್ರವಾಸ, ಚರಿತ್ರೆ, ಕಲೆಗೆ ಸಂಬಂದಿಸಿದವು. ಇಷ್ಟಲ್ಲದೆ ೧೯೯೧-೯೩ರಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಕನ್ನಡ ಉಪನ್ಯಾಸಕನಾಗಿದ್ದರೂ ಶಿರ್ವದ ಸೈಂಟ್ ಮೆರೀಸ್ ಕಾಲೇಜಿನಲ್ಲಿ ಇದನ್ನು ಪಾಠ ಮಾಡಿದ ಅನುಭವವವೂ ನನಗಿದೆ. ಕಂಪ್ಯೂಟರ್ ಇತ್ಯಾದಿ ಕುರಿತಂತೆ ನಾನು ನಿರ್ಮಿಸಿದ ಚಿತ್ರಗಳು ೧೭೦ ಕ್ಕಿಂತ ಹೆಚ್ಚು. ಯಾವುದೇ ಹೊಸ ವಿಷಯಗಳಿದ್ದಲ್ಲಿ ನಾನು ಅದನ್ನು ಕಲಿಯಲು ಬಯಸುತ್ತೇನೆ.

ಇದು ತನಕ ನಿರ್ಮಿಸಿದ ಚಿತ್ರಗಳು
ನಾನು ಇದುವರೆಗೆ ನಿರ್ಮಿಸಿದ ದೀರ್ಘವಾದ ಚಿತ್ರಗಳು ಒಂದು ಗಂಟೆಯ ಜ್ಯೋತ್ಸ್ನಾ ಮತ್ತು ಭಿನ್ನ. ವೀಡಿಯೋ ಕವನಗಳು ೫೦. ಇವಲ್ಲದೆ ವಿದ್ಯಾರ್ಥಿಗಳ ಚಿಂತನಶೀಲತೆಯನ್ನು ಬೆಳೆಸಲು ಸದ್ಯಕ್ಕೆ ೧೨೦ ಶೈಕ್ಷಣಿಕ ಚಿತ್ರಗಳನ್ನು ನಿರ್ಮಿಸಿದ್ದೇನೆ. ಚಿತ್ರ ನಿರ್ಮಾಣ ಮುಂದುವರಿಯುತ್ತಿದೆ.

ನಿಮ್ಮ ಇತ್ತೀಚಿನ ಚಿತ್ರಗಳ ವಿವರ

ನನ್ನ ಕಿರು ಚಿತ್ರಗಳ ಸಮಯ ವ್ಯಾಪ್ತಿ ೫ ರಿಂದ ೨೦ ನಿಮಿಷಗಳ ತನಕ ಇರುತ್ತದೆ. ಅದನ್ನು ವೀಡಿಯೋ ಕವನ ಎಂದು ಕರೆಯಲು ಬಯಸುತ್ತೇನೆ. ಕಲ್ಲು ಕರಗುವ ಸಮಯ-ಎಂಬ ಚಿತ್ರ ಖಾಸಗೀಕರಣ-ಜಾಗತೀಕರಣ-ಪರಿಸರ ನಾಶದ ಸಮಸ್ಯೆಗಳನ್ನು ಪ್ರಸ್ತುತಪಡಿಸುತ್ತದೆ. ಡಾರ್ಲಿಂಗ್ -ಎಂಬ ಚಿತ್ರ ಡಿಶುಂ ಡಿಶುಂ ಶೈಲಿಯ ವ್ಯಾಪಾರೀ ಸ್ವರೂಪವನ್ನು ಹೊಂದಿದ್ದು ಯುವಜನರ ಪ್ರೇಮದ ಹಗಲುಗನಸಿನ ಚಿತ್ರಣವನ್ನು ನೀಡುತ್ತದೆ. ಇದು ಕಮರ್ಶಿಯಲ್ ಚಿತ್ರದ ನೆಲೆಯಲ್ಲಿ ಮಾಡಿದ ಪ್ರಯೋಗ. ನನ್ನ ಭಾರತ-ಚಿತ್ರದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು (ರೂಪಕ) ಸಾಂಕೇತಿಕವಾದ ರೀತಿಯಲ್ಲಿ ಚಿತ್ರಿಸಲಾಗಿದೆ. ಚಪ್ಪಲಿಗಳು-ವಿಚಾರಶೀಲತೆಯನ್ನು ಪ್ರೇರಿಸುವ, ವೈಚಾರಿಕ ಆಯಾಮಗಳನ್ನು ಹೊಂದಿದ ಹಾಸ್ಯಮಯ ಚಿತ್ರ. ಚೈನು-ಚಿತ್ರವು ಮನಸ್ಸಿನೊಳಗೆ ನಡೆಯುವ ದ್ವಂದ್ವವನ್ನು ನಾನಾ ರೀತಿಯ ಸಂಕೇತಗಳನ್ನು ಬಳಸಿಕೊಂಡು ಚಿತ್ರಿಸುತ್ತದೆ. ಭೂತ-ಚಿತ್ರವು ಕೊಲೆಗಾರನಿಗೆ ಅವನ ಪಾಪ ಪ್ರಜ್ಞೆಯ ಸಂಕೇತವಾದ ಭೂತವು ಬಂದು ಉಂಟುಮಾಡುವ ಭಯವನ್ನು ಫ್ಲಾಷ್ ಪಾರ್ವಡ್ ವಿಧಾನದಲ್ಲಿ ಚಿತ್ರಿಸುತ್ತದೆ. ಇದು ಹಾರರ್ ಚಿತ್ರದ ಅಧ್ಯಯನಕ್ಕಾಗಿ ನಡೆಸಿದ ಪ್ರಯೋಗ. ಚೂರಿ ಮತ್ತು ದೇವರು-ಚೇಸ್ ತಂತ್ರವನ್ನು ಬಳಸಿಕೊಂಡು ಮೌಲ್ಯ ಪ್ರತಿಪಾದನೆಯನ್ನು ಮಾಡುವ ಚಿತ್ರವಾಗಿದೆ. ಸಾವಿನ ಕಥೆ ಚಿತ್ರವು ಮಧ್ಯಮ ವರ್ಗದವರ ಮೇಲೆ ಹೈಟೆಕ್ ಆಸ್ಪತ್ರೆಗಳು ಉಂಟು ಮಾಡುವ ಪರಿಣಾಮವನ್ನು ಚಿತ್ರಿಸುತ್ತದೆ. ಇದು ಸಂಭಾಷಣಾ ಪ್ರಧಾನವಾದ ಚಿತ್ರವಾಗಿದೆ. ಓ ದೇವ್ರ್ರೆ-ಎಂಬುದು ಒಂದೇ ಪಾತ್ರವಿರುವ ವಿಡಂಬನೆಯ ನೆಲೆಯ ಚಿತ್ರವಾಗಿದೆ. ಇದು ಪರಿಹಾರವೆ-ಎಂಬುದು ಭಯೋತ್ಪಾದನೆಯನ್ನು ಕುರಿತ ಕ್ರಿಯಾ ಪ್ರಧಾನವಾದ ಚಿತ್ರವಾಗಿದೆ. ಬದಲಾವಣೆ ಬೇಕಾಗಿದೆ-ಎಂಬುದು ವರದಕ್ಷಿಣೆಯ ಕಥಾವಸ್ತುವನ್ನು ಹೊಂದಿದ ಚಿತ್ರ. ಹೀಗೆ ಇಲ್ಲಿಯ ಚಿತ್ರಗಳನ್ನು ಅತಿ ಮಾನುಷ, ಚೇಸಿಂಗ್, ಮನೋವೈಜ್ಞಾನಿಕ, ಹಾಸ್ಯ, ಸಂಬಾಷಣಾ ಪ್ರಧಾನ, ಸಾಂಕೇತಿಕ, ವ್ಯಾಪಾರೀ ಮಾದರಿ, ಕ್ರಿಯಾ ಪ್ರಧಾನ ಎಂದು ವಿಂಗಡಿಸಬಹುದಾಗಿದೆ. ವೈವಿಧ್ಯತೆಯನ್ನು ಸಾಧಿಸುವುದಕ್ಕಾಗಿ ಮತ್ತು ನಾನಾ ರೀತಿಯ ಚಿತ್ರಗಳನ್ನು ಮಾಡಬಹುದಾದ ಸಾಮರ್ಥ್ಯವನ್ನು ಪರೀಕ್ಷಿಸುವುದಕ್ಕಾಗಿ ಈ ರೀತಿಯ ಪ್ರಯೋಗವನ್ನು ಮಾಡಲಾಗಿದೆ


ವೀಡಿಯೋ ಕವನವೆಂದರೆ....

ಇದುವರೆಗೆ ಬಿಳಿ ಹಾಳೆಯ ಮೇಲೆ ಬರೆದುಕೊಂಡು ಬಂದ ಕವನಗಳಿಗೂ ವೀಡಿಯೋದ ಮೂಲಕ ಚಿತ್ರಿಸುವ ಕವನಗಳಿಗೂ ಮೂಲಭೂತವಾದ ವ್ಯತ್ಯಾಸವಿದೆಯೆ ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಕವನಗಳ ಮೂಲಭೂತವಾದ ಲಕ್ಷಣವೆಂದರೆ ಸಂಕ್ಷಿಪ್ತತೆ, ಕಲಾತ್ಮಕತೆ ಹಾಗೂ ದಾರ್ಶನಿಕತೆ.

ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆ, ಮಾಧ್ಯಮ ಕ್ರಾಂತಿಯಿಂದಾಗಿ ಕವಿಯಾದವನು ಅಕ್ಷರಗಳ ನೆರವಿಲ್ಲದೆ ಕವನವನ್ನು ಸೃಷ್ಟಿಸುವ ಹೊಸ ಅವಕಾಶ ಒದಗಿಬಂದಿದೆ. ಬಹುಶಃ ಅದನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಉಡುಪಿಯ ಶಿರ್ವ ಸಮೀಪದ ಸೈಂಟ್ ಮೆರೀಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್ ರಾವ್‌ರವರು ಬಳಸಿಕೊಂಡಿದ್ದಾರೆ.

ಕವನವೆಂದರೆ ಬದುಕಿನ ಯಾವುದೇ ಅನುಭವವನ್ನು ಅಕ್ಷರಗಳ ಮೂಲಕ ಕಲಾತ್ಮಕವಾಗಿ-ಸಹಜವಾದ ಛಂದಸ್ಸಿನ ಮೂಲಕ ಹೇಳುವುದು. ವೀಡಿಯೋ ಕವನದ ಸ್ವರೂಪ ಮತ್ತು ಆಶಯ ಇದೇ ಆಗಿರುತ್ತದೆ. ವೀಡಿಯೋ ಕವನವೆಂದರೆ ಕ್ಯಾಮರಾದ ಮುಂದೆ ನಿಂತು ಕವನವನ್ನು ಓದುವುದಲ್ಲ. ಚಲನ ಚಿತ್ರ, ಶಬ್ಧ, ಸಂಗೀತವನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಹೇಳುವುದು. ವೀಡಿಯೋ ಕ್ಯಾಮರಾದ ಮೂಲಕ ಜೀವನದ ಸಂಗತಿಗಳನ್ನು ಚಿತ್ರೀಕರಿಸುವುದು. ಹೀಗೆ ಚಿತ್ರೀಕರಿಸುವಾಗ ಸೃಜನಶೀಲತೆ, ಒಳನೋಟ ಮತ್ತು ದಾರ್ಶನಿಕತೆ ಬೇಕು. ಹೀಗೆ ಚಿತ್ರೀಕರಿಸಿದ್ದನ್ನು ಕಂಪ್ಯೂಟರಿಗೆ ತರಬೇಕು. ಉದಾಹರಣೆಗಾಗಿ ಎರಡು ಗಂಟೆಯಷ್ಟು ಕಾಲ ಚಿತ್ರಿಸಿದ ರಥೋತ್ಸವ ಮತ್ತು ಜಾತ್ರೆಯನ್ನು ಹತ್ತು ನಿಮಿಷದ ಅವಧಿಗೆ ಸಂಕ್ಷಿಪ್ತಗೊಳಿಸಬೇಕು. ಈ ಸಂಕ್ಷಿಪ್ತಗೊಳಿಸುವಲ್ಲಿಯೂ ಕವಿ ಮನಸ್ಸು ಕೆಲಸ ಮಾಡುತ್ತದೆ. ಇಲ್ಲಿಯ ಮುಖ್ಯವಾದ ಸಲಕರಣೆ ಎಡಿಟಿಂಗ್ ಅಂದರೆ ಸಂಕಲನ. ಈ ಸಂಕಲನ ಕ್ರಿಯೆ ಕವನಕ್ಕೆ ಸೃಜನಶೀಲತೆ, ಒಳನೋಟ ಮತ್ತು ದಾರ್ಶನಿಕತೆಯನ್ನು ಒದಗಿಸುವ ಇನ್ನೊಂದು ಹಂತ.

ವೀಡಿಯೋ ಕವಿಗೆ ಕವಿ ಮನಸ್ಸಿನ ಜೊತೆಗೆ ವೀಡಿಯೋ ತಂತ್ರಜ್ಞಾನದ ಅರಿವು ಇರಬೇಕು. ಎನ್. ಭವಾನಿಶಂಕರ್‌ರವರು ತಮ್ಮ ವೀಡಿಯೋ ಕವನಗಳಿಗಾಗಿ-ವೀಡಿಯೋ ಕ್ಯಾಮರಾದ ಮೂಲಕ ಚಿತ್ರೀಕರಣ, ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ಕಂಪ್ಯೂಟರ್‌ನಲ್ಲಿ ಸಂಕಲನ, ಫೋಟೋಷಾಪ್ ಮತ್ತು ಇತರ ಸಾಫ್ಟ್‌ವೇರ್‌ಗಳ ಮೂಲಕ ಗ್ರಾಫಿಕ್ಸ್, ಸಂಗೀತಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳ ಮೂಲಕ ತಾವೇ ಸಂಗೀತ ನೀಡುತ್ತಾರೆ. ಅಂದರೆ ಇದು ಏಕ ವ್ಯಕ್ತಿಯ ಸಿನಿಮಾ. ಕವಿ ಏಕಾಂಗಿ ಹೇಗೋ ಹಾಗೆ.

ಕೆಲವು ಜಾಹೀರಾತುಗಳು, ಟೀವಿ ಕಾರ್ಯಕ್ರಮಗಳ ಶೀರ್ಷಿಕೆಗಳಗಳಲ್ಲಿ ಕೆಲವೊಮ್ಮೆ ಈ ಗುಣಗಳು ಕಂಡುಬರಬಹುದಾದರೂ ಅವು ವೀಕವನವಾಗುವುದಿಲ್ಲ. ಏಕೆಂದರೆ ಅವುಗಳಲ್ಲಿ ಸಂಕ್ಷಿಪ್ತತೆ, ಮತ್ತು ಕಲಾತ್ಮಕತೆಯಿದ್ದರೂ ದಾರ್ಶನಿಕತೆ ಇರುವುದಿಲ್ಲ ಅಥವಾ ಮಾನವತೆಯ ಪರವಾಗಿರುವುದಿಲ್ಲ. ಅಥವಾ ಅಲ್ಲಿನ ಎಲ್ಲಾ ಚಿತ್ರ ತುಣುಕುಗಳು ವೀಡಿಯೋ ಕವನದಂತೆ ಕೇಂದ್ರ ದರ್ಶನದ ಕಡೆಗೆ ಮುಖ ಮಾಡಿ ನಿಲ್ಲುವುದಿಲ್ಲ. ಈ ಇಲ್ಲಗಳು ಹೌದು ಆದಾಗ ಅವು ವೀಡಿಯೋ ಕವನವಾಗುತ್ತವೆ.

ಉದಾಹರಣೆಗಾಗಿ ಏರ್‌ಟೆಲ್‌ನ ಈ ಹಿಂದೆ ಬಂದ ಎಕ್ಸ್‌ಪ್ರೆಸ್ ಯುವರ್‌ಸೆಲ್ಫ್, ಎಂಟಿ‌ಆರ್‌ನ ಪುಳಿಯೋಗರೆಯ ಕಳ್ಳ, ಕೆಲವು ಕಾರ್ಯಕ್ರಮಗಳ ಆರಂಭದಲ್ಲಿ ಬರುವ ಒಂದು ಸಂಗೀತದ ಮೇಲೆ ವೇಗವಾಗಿ ಸಾಗುವ ಚಿತ್ರದ ತುಣುಕುಗಳಲ್ಲಿ ಇಂತಹ ಲಕ್ಷಣ ಕಂಡು ಬರುವುದಾದರೂ ಅವುಗಳಲ್ಲಿ- ದಾರ್ಶನಿಕತೆ ಅಥವಾ ಮಾನವೀಯತೆ ಅಥವಾ ಅಲ್ಲಿನ ಎಲ್ಲಾ ಚಿತ್ರ ತುಣುಕುಗಳು ಆ ಕೃತಿಯ ಕೇಂದ್ರ ದರ್ಶನದ ಕಡೆಗೆ ಮುಖ ಮಾಡಿ ನಿಲ್ಲುವ, ಅದಕ್ಕಾಗಿ ದುಡಿಯುವ ಅಂಶಗಳು ಇರುವುದಿಲ್ಲ.
ಆದ್ದರಿಂದ ಇಲ್ಲಿ ಪೆನ್ನಿಗೆ ಬದಲಾಗಿ ವೀಡಿಯೋ ಕ್ಯಾಮರಾ, ಕಂಪ್ಯೂಟರ್, ಎಡಿಟಿಂಗ್, ಗ್ರಾಫಿಕ್ಸ್ ಸಲಕರಣೆಗಳು ಕೆಲಸ ಮಾಡುತ್ತವೆ. ಒಂದು ಪೆನ್ನಿನ ಹಿಂದೆ ಇರುವಂತೆಯೆ ಇಲ್ಲಿ ಕೂಡ ಜೀವನಾನುಭವ, ಬಹುಜ್ಞತೆ, ದಾರ್ಶನಿಕತೆ, ಕಲಾತ್ಮಕ ದೃಷ್ಟಿಕೋನ, ಮಾನವತೆಯ ಅಂಶಗಳು ಪ್ರತಿ ಹಂತದಲ್ಲೂ ಕೆಲಸಮಾಡಲೇ ಬೇಕಾಗುತ್ತದೆ.

ಒಂದು ಒಳ್ಳೆಯ ಕಥೆ ಹೇಳುವ ಕಲಾತ್ಮಕ ಸಿನಿಮಾಕ್ಕೂ ಇದನ್ನು ಹೋಲಿಸಬಹುದು. ಅದರೆ ಅಲ್ಲಿ ಕೃತಿಯ ಸ್ವರೂಪ ವಿಸ್ತಾರವಾಗಿರುತ್ತದೆ ಕಾದಂಬರಿಯಂತೆ. ಆದರೆ ಅಲ್ಲಿ ಸಂಕ್ಷಿಪ್ತತೆಯ ಅಂಶವಿರುವುದಿಲ್ಲ. ಆದರೆ ವೀಡಿಯೋ ಕವನದಲ್ಲಿ ಅದು ಇರಲೇ ಬೇಕಾಗುತ್ತದೆ.

ಹಾಗಾದರೆ ಒಂದು ಕವನಕ್ಕೂ ವೀಡಿಯೋ ಕವನಕ್ಕೂ ವ್ಯತ್ಯಾವಿಲ್ಲವೆ. ಇದೆ. ಒಂದು ಬಿಳಿ ಹಾಳೆಯ ಮೇಲೆ ಪೆನ್ನಿನ ಮೂಲಕ ಏಕಾಂತತೆಯ ಧ್ಯಾನಸ್ಥ ಸ್ಥಿತಿಯಲ್ಲಿ ಏನನ್ನು ಬೇಕಾದರೂ ಚಿತ್ರಿಸಬಹುದು. ಆದರೆ ವೀಕವನದ ಕವಿಯೂ ಜನಜಂಗುಳಿಯ ನಡುವೆ ಏಕಾಂತತೆಯ ಧ್ಯಾನಸ್ಥ ಸ್ಥಿತಿಯನ್ನು ಸಾಧಿಸಿಕೊಳ್ಳಬೇಕು. ಆದರೆ ಇಲ್ಲಿನ ಕವಿ ತನಗೆ ಬೇಕಾದ ಒಂದು ಹೂವಿನ ಅಥವಾ ಆಕಾಶದ ಬಣ್ಣ ಬರುವವವರೆಗೆ, ತನ್ನ ಕಲ್ಪನೆಯ ಭಿಕ್ಷುಕ ಸಿಗುವವರೆಗೆ ಕಾಯಬೇಕಾಗುತ್ತದೆ. ಕಂಪ್ಯೂಟರ್‌ನ ಎಡಿಟಿಂಗ್‌ನಲ್ಲಿ ಚಿತ್ರಗಳನ್ನು ಬೇರೆ ಬೇರೆ ರೀತಿಯಲ್ಲಿ ಜೋಡಿಸಿ ತನಗೆ ಬೇಕಾದ ಪರಿಣಾಮ ಬಂತೆ ಎಂದು ಕಾಯಬೇಕಾಗುತ್ತದೆ. ಅಂದರೆ ಅಕ್ಷರದ ಕವಿ ಇದನ್ನೆಲ್ಲ ಮಾಡುತ್ತಾನಾದರೂ ಅವನಿಗಿಂತ ಹೆಚ್ಚಿನ ಸಮಯ ಈ ಕವಿಗೆ ಬೇಕು.

ಕವಿಗೆ ಅಕ್ಷರ ಜಗತ್ತು ಆಧಾರವಾದರೆ ಇಲ್ಲಿ ಚಿತ್ರ, ಧ್ವನಿ ಮತ್ತು ಸಂಗೀತದ ಅವಕಾಶಗಳು ಇರುವುದರಿಂದ ಇಲ್ಲಿನ ಹೋಲಿಕೆ ಅಥವಾ ಚಿತ್ರಣ ಕವಿ ಕೊಡುವ ಚಿತ್ರಣ ಅಥವಾ ಹೋಲಿಕೆಗಿಂತ ಭಿನ್ನವಾಗಿರುತ್ತದೆ. ಕವಿ-ಎಂಥ ತಂಪು ಗಾಳಿ ಬೀಸಿತು, ಮನಕೆ ಮುದವು ಬಂದಿತು-ಎಂದರೆ ವೀಡಿಯೋ ಕವಿ-ಗಾಳಿಗೆ ಅಲುಗುವ ಮರದ ಹಸಿರು ಗೆಲ್ಲು, ಅಲುಗಾಡುವ ಎಲೆಯ ಮೇಲಿನ ಇಬ್ಬನಿ, ನದಿಯ ತೀರದಲ್ಲಿ ಕುಳಿತಿರುವ ಅವನ ಮುಖದ ಕಿರು ನಗೆಯ ಅನಂತರ ಬಿಸಿಲ ಕಿರಣದ ಹಿನ್ನೆಲೆಯಲ್ಲಿ ಚಿಮ್ಮುವ ಕಾಡಿನ ಕಾರಂಜಿಯನ್ನು ತೋರಿಸಬಹುದು.

ಹೀಗೆ ಅಕ್ಷರದ ಕವನ ಮತ್ತು ವೀಕವನದ ಮೂಲಭೂತ ಆಶಯಗಳು ಒಂದೇ ಆದರೂ ಅವುಗಳ ನಿರ್ಮಾಣದ ಪ್ರಕ್ರಿಯೆ ಮಾತ್ರ ಪೂರ್ಣ ಭಿನ್ನವಾಗಿರುತ್ತದೆ.

ಇದುವರೆಗೆ ಎನ್. ಭವಾನಿಶಂಕರ್ ನಿರ್ಮಿಸಿದ ವೀಡಿಯೋ ಕವನಗಳ ಸಂಖ್ಯೆ ೫೦ಕ್ಕೂ ಹೆಚ್ಚು. ಚಪ್ಪಲಿಗಳು ಎಂಬ ವೀಡಿಯೋ ಕವನದಲ್ಲಿ ಮನುಷ್ಯ ಪಾತ್ರಗಳಿದ್ದರೆ, ಶಿವ ಎಂಬ ಕೃತಿಯಲ್ಲಿ ಕೇವಲ ಸಮುದ್ರ ಮಾತ್ರ ಇದೆ. ನನ್ನ ಭಾರತ ಎಂಬುದು ರಾಜಕಾರಣ ಮತ್ತು ಬಡತನದ ವಾಸ್ತವವನ್ನು ಅಸಂಗತ ತಂತ್ರದ ಮೂಲಕ ಹೇಳುವ ಕವನ.

ಇದುವರೆಗೆ ಅವರು ನಿರ್ಮಿಸಿದ ವೀಡಿಯೋ ಕವನಗಳು: ಹಸಿರು, ಶಿವ, ಅವನತಿ, ರುದ್ರ, ಸಾಂಸ್ಕೃತಿಕ ಬಿಕ್ಕಟ್ಟು, ಸೌಂದರ್ಯ ಮತ್ತು ಸತ್ಯ, ಪ್ರಕೃತಿಗೆ, ಬಾಹುಬಲಿಗೆ ನಮಸ್ಕಾರ, ಆಸ್ಪೋಟ, ಸಮುದ್ರ ಮತ್ತು ಮನುಷ್ಯ, ಭವಿಷ್ಯತ್ತಿನ ಕನಸುಗಳು, ಒಂದು ಬೀಚಲ್ಲಿ ಒಂದು ಸಂಜೆ, ಗಾಳಿಪಟ, ಓ ದೇವ್ರೆ, ಚಪ್ಪಲಿಗಳು, ಕಲ್ಲು ಕರಗುವ ಸಮಯ, ಡಾರ್ಲಿಂಗ್, ಚೈನು, ನನ್ನ ಭಾರತ, ಭೂತ, ಚೂರಿ ಮತ್ತು ದೇವರು, ಕಲಾತ್ಮಕ ಧ್ಯಾನ, ಅನೇಕ, ಕೋಣಗಳ ಭಾವನೆಗಳು, ಬಣ್ಣಗಳ ನೃತ್ಯ, ಪೂರ್ವದಿಂದ ಪಶ್ಚಿಮಕ್ಕೆ ಅಥವಾ, ಜಾತ್ರೆ ಮತ್ತು ಭಕ್ತಿ, ಕ್ರೌರ್ಯ, ಕೃಷ್ಣ ಸಂಭ್ರಮ, ಲಾವಾ ಕವನ, ತಾಯಿ ನೇತ್ರಾವತಿ, ನೈಸ್ ಜಾಬ್, ಪ್ರತಿಭಟನೆ, ರಥ ಜನ ಜನ ರಥ, ಹುಡುಕಾಟ, ಮಾತನಾಡುವ ಹುಲಿಗಳು, ಒಂದು ಭೂಮಿಯ ಕತೆ, ತುಳು ಹಳ್ಳಿಯ ಚಿತ್ರಗಳು, ಕಲ್ಪನೆಯ ಬೆರಳುಗಳು, ಭಗೀರಥರು, ಕಲ್ಪನೆಗೊಂದು ಮಿತಿ, ಹೆಣ್ಣಿನ ಜನ್ಮ ಹಾಳು ಇತ್ಯಾದಿ



ವೀಡಿಯೋ ಕವನ-ಅನುಭವದ ಹಿನ್ನೆಲೆ


ಬೇರೆ ಬೇರೆ ವಸ್ತುಗಳನ್ನು ಆಧರಿಸಿದ ವೀಡಿಯೋ ಕವನಗಳನ್ನು ನಿರ್ಮಿಸಲು ವ್ಯಾಪಕವಾದ ಓದು ಮತ್ತು ಅನುಭವದ ಹಿನ್ನೆಲೆ ಬೇಕು. ಇದರ ಹಿನ್ನೆಲೆಯನ್ನು ಗಮನಿಸಬಹುದಾಗಿದೆ. ಎನ್. ಭವಾನಿಶಂಕರ್‌ರವರು ಕಾಲ ಕಾಲಕ್ಕೆ ತಮ್ಮ ಹವ್ಯಾಸಗಳನ್ನು ಹಾಗೂ ಅಧ್ಯಯನದ ನೆಲೆಗಳನ್ನು ಬದಲಿಸಿಕೊಂಡು ಬಂದಿದ್ದಾರೆ. ೧೯೮೨-೮೩ರಲ್ಲಿ ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ ಎಂಬ ಎರಡು ಕವನ ಸಂಕಲನಗಳು ಪ್ರಕಟವಾದವು. ೧೯೮೨-೮೪ರಲ್ಲಿ ಜಿಂದಾಬಾದ್ ಜಿಂದಾಬಾದ್ , ಬ್ರಾಹ್ಮಣ ಶೂದ್ರ, ಕೆಂಪು ಕೋಗಿಲೆ, ಗೋಲೀಬಾರ್, ಪ್ರೇಮಾಸೈಟಿಸ್ ಎಂಬ ಐದು ನಾಟಕಗಳು ಪ್ರಕಟವಾದವು. ೧೯೮೨-೮೫ ರ ಮೂರು ವರ್ಷಗಳ ಅವಧಿಯಲ್ಲಿ ಪತ್ರಿಕೆಗಳಿಗಾಗಿ ೭೦ ಕ್ಕೂ ಹೆಚ್ಚು ಸಾಹಿತ್ಯೇತರ ಲೇಖನಗಳನ್ನು ಬರೆದರು. ತಮ್ಮ ಲೇಖನಗಳಿಗಾಗಿ ತಾವೇ ಕ್ಯಾಮರ ಹಿಡಿದು ಫೋಟೋ ಕ್ಲಿಕ್ಕಿಸಿದರು.

೧೯೯೯ ರಿಂದ ಆರಂಭಿಸಿ ಇಲ್ಲಿಯವರೆಗೆ ಹತ್ತು ವರ್ಷಗಳಿಂದ ವೀಡಿಯೋ ತಂತ್ರಜ್ಞಾನದ ಕ್ಷೇತ್ರದಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದರ ಬೇರೆ ಬೇರೆ ಯಂತ್ರ ಹಾಗೂ ಸಾಫ್ಟ್‌ವೇರ್‌ಗಳ ಜೊತೆಗೆ ಕೆಲಸ ಮಾಡಿದ್ದಾರೆ.


ಎನ್. ಭವಾನಿಶಂಕರ್, ಸಂತ ಮೇರಿ ಕಾಲೇಜು, ಕನ್ನಡ ಉಪನ್ಯಾಸಕರು, ಶಿರ್ವ, ಉಡುಪಿ ಜಿಲ್ಲೆ-೧೯೮೦ ರಿಂದ
ಪತ್ರಿಕಾ ಲೇಖನಗಳು- ೭೦ ಕ್ಕ್ಕೂ ಜಾಸ್ತಿ (೧೯೮೨-೮೫)
ಪತ್ರಿಕೆಯಲ್ಲಿ ಪ್ರಕಟವಾದ ಸ್ಥಿರ ಚಿತ್ರಗಳು-೨೫ (೧೯೮೨-೮೫)
ಕವನ ಸಂಕಲನಗಳು-೨ ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ (೧೯೮೨- ೮೩)
ನಾಟಕಗಳು-೫ ಜಿಂದಾಬಾದ್ ಜಿಂದಾಬಾದ್ , ಬ್ರಾಹ್ಮಣ ಶೂದ್ರ , ಕೆಂಪು ಕೋಗಿಲೆ
ಗೋಲೀಬಾರ್, ಪ್ರೇಮಾಸೈಟಿಸ್ (೧೯೮೨-೮೪)
ಸಂಪಾದಕರು
ಬಳಕೆದಾರರ ಪತ್ರಿಕೆ, ಶಿರ್ವ (೧೯೮೩)
ಆಕಾಶವಾಣಿ, ಮಂಗಳೂರು
ಕವನ ವಾಚನ, ಚರ್ಚೆ, ಸಂದರ್ಶನ, ನಾಟಕ ನಿರ್ದೇಶನ (೧೯೮೩-೮೮)
ಅಧ್ಯಕ್ಷರು
ಜಾಸ್ಮಿನ್ ಜೇಸಿಸ್, ಶಿರ್ವ (೧೯೮೪-೮೫)
ಸೈಂಟ್ ಮೇರಿ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ (೧೯೯೧-೯೩)
ಶೈಕ್ಷಣಿಕ ಚಿತ್ರ ನಿರ್ಮಾಣ (೨೦೦೦-) ೧೭೦ ಚಿತ್ರಗಳು
ಸಂತ ಮೇರಿ ಕಾಲೇಜಿನಲ್ಲಿ ಪ್ರತೀ ಶನಿವಾರ ಮಧ್ಯಾಹ್ನ, ಶೈಕ್ಷಣಿಕ ಚಿತ್ರಗಳನ್ನು ಬಳಸಿ ಬೇರೆ ಬೇರೆ ವಿಷಯಗಳನ್ನು ಕುರಿತ ಪಾಠ (೨೦೦೬-)

ವಿಳಾಸ: ಎನ್. ಭವಾನಿಶಂಕರ್, ಸಂತ ಮೇರಿ ಕಾಲೇಜು, ಕನ್ನಡ ಉಪನ್ಯಾಸಕರು, ಅಂಚೆ: ಶಿರ್ವ, ಉಡುಪಿ ಜಿಲ್ಲೆ-೫೭೪೧೧೬, ದೂರವಾಣಿ: ೦೮೨೦-೨೫೫೪೮೯೮, ೯೨೪೨ ೨೩೨೩೨೩



ಭವಾನಿ ಶಂಕರ್ ನಿರ್ಮಿಸಿದ ಟೆಲಿ ಚಿತ್ರಗಳ ಪಟ್ಟಿ

2 comments:

  1. This comment has been removed by the author.

    ReplyDelete
  2. Dear Prof. Bhavani Shankar,
    Its nice to read your blog and to see the developments you have been making in the field of communication.
    I am Prakash Menezes, one of the students, who joined you in the initial days of your Videography classes in St. Mary's College.
    It's nice to see how much more you have acheived in the years that are past.
    Presently I am in Indore, M.P., waiting for my VISA to Australia to do my Theology.
    I wish you all the best and wish you all success in this communication field.

    ReplyDelete